ದಾರಾ ಶುಕೋಹ್
 	1615-1659. ಮೊಗಲ್ ಚಕ್ರವರ್ತಿ ಶಾಹಜಹನನ ಹಿರಿಯ ಮಗ. ಮಮತಾಜಳಲ್ಲಿ ಹುಟ್ಟಿದವನು. ಅರಬ್ಬಿ, ಪಾರಸಿ ಹಾಗೂ ಸಂಸ್ಕøತ ಭಾಷೆಗಳಲ್ಲಿ ವಿದ್ವಾಂಸನಾಗಿದ್ದನಲ್ಲದೆ ಧಾರ್ಮಿಕನೂ ಸದ್ಗುಣಿಯೂ ಉದಾರಹೃದಯನೂ ಆಗಿದ್ದ. ಈತನಿಗೆ ಧರ್ಮಾಂದತೆ ಇರಲಿಲ್ಲ. ಸೂಫಿ ಪಂಥದ ಅನುಯಾಯಿಯಾಗಿದ್ದ ಇವನು ಹಿಂದೂ ಮತ್ತು ಕ್ರೈಸ್ತ ಧರ್ಮಗಳಲ್ಲೂ ಆಸಕ್ತಿ ತಳೆದಿದ್ದ. ಉಪನಿಷತ್ತು, ಭಗವದ್ಗೀತೆ, ಯೋಗವಾಶಿಷ್ಠ, ರಾಮಾಯಣಗಳನ್ನು ಇವನು ಸಂಸ್ಕøತದಿಂದ ಪಾರಸಿ ಭಾಷೆಯ ತರ್ಜುಮೆ ಮಾಡಿದ್ದ. ಭಗವದ್ಗೀತೆಯ ಪಾರಸಿ ಆವೃತ್ತಿಯನ್ನು ಓದಿದ ಒಬ್ಬ ಫ್ರೆಂಚ್ ವಿದ್ವಾಂಸ ಅದನ್ನು ಮುಂದೆ ಆ ಆವೃತ್ತಿಯಿಂದ ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳಿಗೆ ಭಾಷಾಂತರಿಸಿದ್ದ. ಭಾರತದ ಘನ ವಿದ್ವಾಂಸರ ಸಾಲಿಗೆ ಸೇರುವ ಯೋಗ್ಯತೆ ಇದ್ದ ದಾರಾ ಒಬ್ಬ ಸ್ವತಂತ್ರ ವಿಚಾರವಾದಿಯಾಗಿದ್ದ. ಆದ್ದರಿಂದ ಮುಸ್ಲಿಂ ಧರ್ಮಾಭಿಮಾನಿಗಳು ಇವನ ಬಗ್ಗೆ ಅಸಮಾಧಾನಗೊಂಡಿದ್ದರು. ಇದು ರಾಜಕಾರಣದಲ್ಲಿ ಇವನಿಗೆ ವಿರೋಧ ಬೆಳೆಯಲು ಕಾರಣವಾಯಿತು. ದಾರಾನ ಶತ್ರುಗಳು ಇದರ ದುರುಪಯೋಗ ಪಡೆದುಕೊಂಡರು.

	ಶಾಹಜಹಾನನೊಂದಿಗೆ ಆರಂಭದಿಂದ ಆಡಳಿತದಲ್ಲಿ ಸಹಕರಿಸುತ್ತಿದ್ದ ದಾರಾನನ್ನು ಪಂಜಾಬಿನ ಸುಬೇದಾರನಾಗಿ ನೇಮಿಸಲಾಗಿತ್ತು. ಆದರೆ ರಾಜಧಾನಿಯಲ್ಲಿದ್ದೇ ಇವನು ಆಡಳಿತ ನಿರ್ವಹಿಸುತ್ತಿದ್ದ. ಆಡಳಿತದಲ್ಲಿ ಪಾಲ್ಗೊಳ್ಳುತ್ತಿದ್ದ ಮತ್ತು ಸಾಹಿತ್ಯಿಕ, ಧಾರ್ಮಿಕ ಅಧ್ಯಯನಗಳಲ್ಲಿ ಮೈಮರೆಯುತ್ತಿದ್ದ ಈತನಿಗೆ ವ್ಯವಹಾರಗಳಲ್ಲಿ ಸಾಕಷ್ಟು ಪರಿಣಿತಿಯಿರದಿದ್ದರೂ ಇವನು ಧೀರಯೋಧನಾಗಿದ್ದ. ಈತ ಕಾಂದಾಹಾರದ ಆಕ್ರಮಣಗಳಲ್ಲಿ ಭಾಗವಹಿಸಿದ್ದರೂ ಅದನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿರಲಿಲ್ಲ. 1657ರಲ್ಲಿ ಶಾಹಜಹಾನನ ಆರೋಗ್ಯ ಕೆಟ್ಟಾಗ ಅವನು 43 ವರ್ಷದ ದಾರಾನನ್ನೇ ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ್ದ. 1658ರ ಆರಂಭದಲ್ಲಿ ನಾಸಿರುದ್ದೀನ್ ತೈಮೂರ್ ಎಂಬ ಹೆಸರಿನಿಂದ ದಾರಾ ಪಟ್ಟವೇರಿದ. ಆದರೆ ಇವನ ಮೂವರು ತಮ್ಮಂದಿರಾದ ಶೂಜ, ಮುರಾದ, ಮತ್ತು ಔರಂಗಜೇಬರು ಇವನ್ನು ವಿರೋಧಿಸಿದರು. ಅವರು ದಾರಾನ ವಿರುದ್ಧ ಸಂಚುಹೂಡಿ ಯುದ್ಧ ಮಾಡಿದರು (1657-58). ಔರಂಗಜೇಬನ ಸೇನೆ ಇವನ್ನು 1658ರ ಏಪ್ರಿಲ್‍ನಲ್ಲಿ ಧರ್ಮತ್‍ನಲ್ಲೂ ಮೇ ತಿಂಗಳಲ್ಲಿ ಸಾಮುಗಢದಲ್ಲೂ ಸೋಲಿಸಿತು. ದಾರಾ ಆಗ್ರಾಕ್ಕೆ ಮರಳುವಂತಿರಲಿಲ್ಲವಾದ್ದರಿಂದ ದೇಶಭ್ರಷ್ಟನಾಗಿ ಪಂಜಾಬ್ ಕಚ್ಛ ಗುಜರಾತ್ ರಾಜಪುಟಾನಗಳಲ್ಲಿ ಅಲೆದಾಡಿ ಸೈನ್ಯವನ್ನು ಸಂಗ್ರಹಿಸಿದ. ದೇವೊರಾಯ್‍ನಲ್ಲಿ ನಡೆದ ಯುದ್ಧದಲ್ಲಿ ದಾರಾ ಸಂಪೂರ್ಣವಾಗಿ ಸೋತು (1659) ಪಲಾಯನಮಾಡಿದ. ಔರಂಗ್eóÉೀಬನ ಸೇನೆ ಇವನನ್ನು ಬೆನ್ನಟ್ಟಿತು. ಮುಂದೆ ದಾರಾ ಅಫ್ಘಾನಿಸ್ತಾನಕ್ಕೆ ಹೋಗಬೇಕೆಂದಿದ್ದಾಗ ಬೋಲನ್ ಕಣಿವೆಯ ಬಳಿಯಲ್ಲಿ ದಾದಾರ್‍ನ ಮಾಂಡಲಿಕ ಮಲಿಕ್ ಜಿವನ್ ಖಾನ್ ಈತನಿಗೆ ಆಶ್ರಯ ನೀಡಿದ. ಅಲ್ಲಿ ದಾರಾನ ಪತ್ನಿ ನಾದಿರಾ ಬೇಗಂ ತೀರಿಕೊಂಡಳು. ಹಿಂದೆ ಶಾಹಜಹಾನನಿಂದ ಮರಣದಂಡನೆಗೆ ಪಾತ್ರನಾಗಿದ್ದು, ದಾರಾನಿಂದ ಜೀವದಾನ ಪಡೆದಿದ್ದ ಜಿವನ್ ಖಾನನೇ ದಾರಾನಿಗೆ ದ್ರೋಹ ಬಗೆದು ಈತನನ್ನು ಹಿಡಿದು ಔರಂಗ್eóÉೀಬನಿಗೆ ಕೊಟ್ಟ. ಔರಂಗ್eóÉೀಬ್ ದಾರಾನನ್ನು ರಾಜಧಾನಿಗೆ ತಂದು ಹರಕುಬಟ್ಟೆಯಲ್ಲಿ ಮೆರವಣಿಗೆ ಮಾಡಿಸಿ, ಧರ್ಮಾಂತರ ಮಾಡಿದನೆಂದು ಅಪಾದನೆ ಹೊರಿಸಿ 1659ರ ಆಗಸ್ಟ್ 30ರಂದು ಇವನಿಗೆ ಮರಣ ದಂಡನೆ ವಿಧಿಸಿದ. ದಾರಾನ ಹಿರಿಯ ಮಗ ಸುಲೇಮಾನನನ್ನೂ ಬಂಧನದಲ್ಲಿಟ್ಟು ಮಂದವಿಷ ಪ್ರಯೋಗಿಸಿ ಕೊಲ್ಲಿಸಿದ (1662). ದಾರಾನ ಜೊತೆಯಲ್ಲಿ ಬಂಧಿತನಾಗಿದ್ದ ಇವನ ಕಿರಿಯ ಮಗ ಸಿಫಿರ್ ಶುಕೋಹನನ್ನು ಕೊಲ್ಲಿಸಲಿಲ್ಲ. ಮುಂದೆ ಅವನು ಔರಂಗ್eóÉೀಬನ ಮೂರನೆಯ ಮಗಳನ್ನು ವರಿಸಿದ. ಶಾಹಜಾಹಾನನ ಅನಂತರ ದಾರಾನೇ ಮೊಗಲ್ ಸಮ್ರಾಟನಾಗಿದ್ದಿದ್ದರೆ ಈತ ಅಕ್ಬರನಿಗಿಂತಲೂ ಘನವಂತಿಕೆಯ ಚಕ್ರವರ್ತಿಯಾಗುತ್ತಿದ್ದನೆಂದೂ ಭಾರತದ ಇತಿಹಾಸವೇ ಬೇರೆ ರೀತಿ ಆಗುತ್ತಿತ್ತೆಂದೂ ಹೇಳಲಾಗಿದೆ. ಈತನ ಕೊಲೆಯಿಂದ ಮೊಗಲ್ ಸಾಮ್ರಾಜ್ಯದ ದುರಂತಾಧ್ಯಾಯದ ಆರಂಭವಾಯಿತು.
(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ